ಕಾಂಪ್ಟನ್ - ಬರ್ನೆಟ್, ಐವಿ

1892-, ಇಂಗ್ಲಿಷ್ ಕಾದಂಬರಿಕಾರ್ತಿ ಸ್ವಂತವಾಗೂ ಲಂಡನ್ ವಿಶ್ವವಿದ್ಯಾಲಯದಲ್ಲೂ ವಿದ್ಯಾಭ್ಯಾಸ ಮಾಡಿ ಸಾಹಿತ್ಯದಲ್ಲಿ ಪದವಿ ಗಳಿಸಿದಳು. 20ನೆಯ ಶತಮಾನದ ಆರಂಭ ವರ್ಷಗಳಲ್ಲಿನ ಶ್ರೀಮಂತ ಮತ್ತು ಮಧ್ಯಮ ವರ್ಗದ ಪಾತ್ರಗಳ ರಮ್ಯ ಪರಿಚಯವನ್ನು ತನ್ನ ಕಾದಂಬರಿಗಳಲ್ಲೀಕೆ ಸಂಭಾಷಣೆಯ ಮಾಧ್ಯಮದಲ್ಲಿ ವ್ಯಕ್ತಗೊಳಿಸಿದ್ದಾಳೆ. ಸಜ್ಜನಿಕೆಯ ಮುಸುಕಿನಲ್ಲಿರುವ ಮಾನವನ ಕ್ರೌರ್ಯ, ಸ್ವಾರ್ಥ, ಮುಂತಾದ ದೌರ್ಬಲ್ಯಗಳ ಸ್ಪಷ್ಟ ಚಿತ್ರೀಕರಣವನ್ನು ಈಕೆಯ ಬರೆಹದಲ್ಲಿ ಕಾಣಬಹುದು.

 ಪಾಸ್ಟರ್ಸ್ ಅಂಡ್ ಮಾಸ್ಟರ್ಸ್ (1925), ಬ್ರದರ್ಸ್ ಅಂಡ್ ಸಿಸ್ಟರ್ಸ್ (1929), ಮ್ಯಾನ್ ಅಂಡ್, ವೈವ್ಸ್ (1931), ಡಾಟರ್ಸ್ ಅಂಡ್ ಸನ್ಸ್ (1937) ಡಾರ್ಕ್‍ನೆಸ್ ಅಂಡ್ ಡೇ (1951), ಮದರ್ ಅಂಡ್ ಸನ್ (1955, ಇದಕ್ಕೆ ಟೇಟ್ ಬ್ಲ್ಯಾಕ್ ಮೆಮೋರಿಯಲ್ ಬಹುಮಾನ ದೊರೆಕಿತು)-ಇವೇ ಮೊದಲಾದವು ಇವಳ ಕಾದಂಬರಿಗಳಲ್ಲಿ ಕೆಲವು 1951ರಲ್ಲಿ ಈಕೆ ಸಿ.ಬಿ.ಇ. (ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಷ್ ಎಂಪೈರ್) ಆಗಿ ಗೌರವಾನ್ವಿತಳಾದಳು. 

 (ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ